ಕೆ.ಎನ್. ರಾಜಣ್ಣ ಹೇಳಿಕೆಗೆ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ತೀವ್ರ ಖಂಡನೆ
ಕಲಬುರಗಿ: ಸುವರ್ಣ ನ್ಯೂಸ್ ವಾಹಿನಿಯ 'ನೇರಾನೇರ' ಸಂದರ್ಶನದಲ್ಲಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎನ್. ರಾಜಣ್ಣ ಅವರ ನಡೆಯನ್ನು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು, ರಾಜಣ್ಣ ಅವರು ಸಮಾಜದ ಕುರಿತು ನಿಷೇಧಿತ ಪದ ಬಳಸಿ ಅವಮಾನಿಸಿದ್ದಾರೆ. ಇದು ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲದೆ, ಇಡೀ ಹಿಂದುಳಿದ ವರ್ಗಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ವಿರೋಧಿ ನಡವಳಿಕೆ: ಒಂದು ಸಮುದಾಯವನ್ನು ಸಾರ್ವಜನಿಕವಾಗಿ ನಿಂದಿಸುವುದು ಅಕ್ಷಮ್ಯ ಅಪರಾಧ. ಕೆ.ಎನ್. ರಾಜಣ್ಣ ಅವರ ಹೇಳಿಕೆಯು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದ್ದು, ಸಮಾಜದಲ್ಲಿ ಜಾತಿ ಆಧಾರಿತ ದ್ವೇಷ ಮತ್ತು ಅಶಾಂತಿಗೆ ಕಾರಣವಾಗುತ್ತಿದೆ.
ಕಾಂಗ್ರೆಸ್ ವಿರುದ್ಧ ಟೀಕೆ: ಸಣ್ಣ ಸಣ್ಣ ಸಮುದಾಯಗಳನ್ನು ಕೀಳಾಗಿ ಕಾಣುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ. ವೃತ್ತಿಯ ಹೆಸರಿನಲ್ಲಿ ಜಾತಿಗಳನ್ನು ಹೀಯಾಳಿಸುವ ಚಾಳಿಯನ್ನು ಆ ಪಕ್ಷದ ನಾಯಕರು ಬೆಳೆಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕ್ರಮಕ್ಕೆ ಆಗ್ರಹ: ಹಡಪದ ಸಮಾಜವನ್ನು ಅಪಮಾನಿಸಿದ ಕೆ.ಎನ್. ರಾಜಣ್ಣ ವಿರುದ್ಧ ಕಾಂಗ್ರೆಸ್ ವರಿಷ್ಠರು ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳು:
ಜಾತಿ ನಿಂದನೆ ತಡೆಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಸವಿಸ್ತಾರವಾಗಿ ಚರ್ಚಿಸಬೇಕು. ಕಾಯಕನಿಷ್ಠ ಹಡಪದ ಅಪ್ಪಣ್ಣ ಸಮಾಜದ ಬಂಧುಗಳಿಗೆ 'ಜಾತಿ ನಿಂದನೆ' ಮಾಡುವವರ ವಿರುದ್ಧ ಕಠಿಣವಾದ 'ಅಟ್ರಾಸಿಟಿ' ಕಾನೂನು ಮಾದರಿಯ ಕಾಯ್ದೆಯನ್ನು ಜಾರಿಗೆ ತರಬೇಕು.
"ನಮ್ಮ ಸಮಾಜದ ಜನರು ಗೌರವದಿಂದ ತಲೆ ಎತ್ತಿ ಬಾಳುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು" ಎಂದು ಮಲ್ಲಿಕಾರ್ಜುನ ಹಡಪದ ಅವರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
Comments
Post a Comment